ಮಂಗಳೂರು, ನ.20: ಮಂಗಳೂರು ವಿಮಾನ ನಿಲ್ದಾಣವನ್ನು ಶೀಘ್ರದಲ್ಲೇ ಅಂತಾರಾಷ್ಟೀಯ ವಿಮಾನ ನಿಲ್ದಾಣವಾಗಿ ಘೋಷಿಸಲಾಗುವುದು ಎಂದು ಕಾರ್ಪೊರೇಟ್ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಪ್ರತಿನಿಧಿ ಗಳೊಂದಿಗಿನ ಸಂವಾದ ಸಭೆಯಲ್ಲಿ ತಿಳಿಸಿದರು.
ಮಂಗಳೂರು ವಿಮಾನ ನಿಲ್ದಾಣ ವನ್ನು ಡಿಸೆಂಬರ್ ಅಂತ್ಯದೊಳಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಧಿಕೃತವಾಗಿ ಘೋಷಿಸಲಾಗುವುದು. ಈ ಬಗ್ಗೆ ಈಗಾಗಲೇ ಸಚಿವರೊಂದಿಗೆ ಹಾಗೂ ಅಧಿಕಾರಿ ಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಮೊಯ್ಲಿ ತಿಳಿಸಿದರು
ಮುಂದಿನ ಅಧಿವೇಶನದಲ್ಲಿ ಬಲಿಷ್ಠ ಲೋಕಪಾಲ ಮಸೂದೆ, ಕಂಪೆನಿ ಕಾಯಿದೆ ತಿದ್ದುಪಡಿ ಮಸೂದೆ: ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಬಲಿಷ್ಠ ಲೋಕಪಾಲ ಕರಡು ಮಸೂದೆ, ಕಂಪೆನಿ ಕಾಯಿದೆ ತಿದ್ದುಪಡಿ ಕರಡು ಮಸೂದೆ 2011ನ್ನು ಮಂಡನೆ ಮಾಡಲಾಗುವುದು. ಇದೇ ಅಧಿವೇಶನದಲ್ಲಿ ತುಳು ಹಾಗೂ ಕೊಡವ ಭಾಷೆ ಯನ್ನು ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಸೇರಿಸುವ ಬಗ್ಗೆ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಮೊಯ್ಲಿ ತಿಳಿಸಿದರು.
ಅಡ್ವಾಣಿಗೆ ಪ್ರಧಾನಿ ಪಟ್ಟದ ಆಕಾಂಕ್ಷಿ: ಬಿಜೆಪಿಯ ಮುಖಂಡ ಅಡ್ವಾಣಿಗೆ ಪ್ರಧಾನಿ ಪಟ್ಟದ ಮೇಲೆ ಆಸಕ್ತಿ ಹೆಚ್ಚಿದ್ದು, ಅವರು ಹಝಾರೆಯಿಂದ ಸ್ಫೂರ್ತಿ ಪಡೆದಿರ ಬಹುದು. ರಾಜ್ಯದಲ್ಲಿರುವ ಬಿಜೆಪಿಯ ಸಮಸ್ಯೆಯನ್ನು ಸರಿಪಡಿಸಲಾಗದವರು ರಾಷ್ಟ್ರವನ್ನು ಮುನ್ನಡೆಸಲು ಸಾಧ್ಯವೇ? ರಾಜ್ಯದಲ್ಲಿ ಲೋಕಾಯುಕ್ತವನ್ನು ದುರ್ಬಲ ಗೊಳಿಸಿ ಮುಚ್ಚಲು ಹೊರಟವರು ಭ್ರಷ್ಟಾಚಾರ ನಿರ್ಮೂಲನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮೊಯಿಲಿ ಲೇವಡಿ ಮಾಡಿದರು. ಎಂಎಸ್‌ಇಝೆಡ್ ವಿಸ್ತರಣೆ ಅಗತ್ಯ: ಅಭಿವೃದ್ಧಿಯ ದೃಷ್ಟಿಯಿಂದ ಎಂಎಸ್‌ಇಝೆಡ್ ವಿಸ್ತರಣೆ ಅಗತ್ಯವಾಗಿ ಆಗಬೇಕಾಗಿದೆ. ಈಗಾಗಲೇ ಶೇ. 80ರಷ್ಟು ರೈತರು ಒಪ್ಪಿಗೆ ನೀಡಿದ್ದಾರೆ. ಇದರಿಂದ ಎರಡು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. 4,600 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಡಿನೋಟಿಫಿಕೇಶನ್ ಮಾಡಿರುವ ಬಗ್ಗೆ ಮುಖ್ಯಮಂತ್ರಿಯನ್ನು ಸಮಾಲೋಚನೆಗೆ ಆಹ್ವಾನಿಸಿ ರುವುದಾಗಿ ಮೊಯ್ಲಿ ತಿಳಿಸಿದರು.
ಪಡುಬಿದ್ರೆಯಲ್ಲಿರುವ ವಿದ್ಯುತ್ ಸ್ಥಾವರದಿಂದ 1,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗು ತ್ತಿದೆ. ಆದರೆ ಅದನ್ನು ವಿತರಿಸಲು ರಾಜ್ಯ ಸರಕಾರ ಬೇಕಾದ ವಿತರಣಾ ಜಾಲದ ವ್ಯವಸ್ಥೆ ಮಾಡದೆ ನಿರ್ಲಕ್ಷ ವಹಿಸಿದೆ. ರಾಜೀವ್ ಗಾಂಧಿ ವಿದ್ಯುದ್ದೀಕರಣ ಯೋಜನೆಗೆ ಕೇಂದ್ರ 60 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಮೊಯ್ಲಿ ತಿಳಿಸಿದರು.
info@mangaloreantimes.com